ಪ್ರಜ್ಞಾಶೂನ್ಯತೆ
ನಿದ್ರಾವಸ್ಥೆಗೆ ಸದೃಶವಾದ ಆದರೆ ಯಾವುದೇ ಬಗೆಯ ಚೋದಕದಿಂದಲೂ ಎಚ್ಚರಗೊಳಿಸಲಾಗದ ಸ್ಥಿತಿ (ಕೋಮ). ಇದು ತೀವ್ರ ಇಲ್ಲವೇ ಸಾಧಾರಣ ಸ್ವರೂಪದ್ದಿರಬಹುದು. ಎರಡನೆಯ ಸ್ವರೂಪದ್ದಕ್ಕೆ ಅಪೂರ್ಣ ಪ್ರಜ್ಞಾಶೂನ್ಯತೆ (ಸೆಮಿಕೋಮ) ಎಂದು ಹೆಸರು. ತೀವ್ರ ಸ್ವರೂಪದ್ದರಲ್ಲಿ ಪ್ರತಿವರ್ತಿಗಳು (ರಿಫ್ಲೆಕ್ಸಸ್) ಸ್ಥಗಿತಗೊಂಡಿರುತ್ತವೆ. ಆದರೆ ಅಪೂರ್ಣ ಸ್ವರೂಪದ್ದರಲ್ಲಿ ಅನೇಕ ಪ್ರತಿವರ್ತಿ ಪ್ರತಿಕ್ರಿಯೆಗಳನ್ನು ಗುರುತಿಸಬಹುದು. ಈ ಪರಿಸ್ಥಿತಿಯಲ್ಲಿ ಕೂಗಿಕರೆದರೆ, ತಟ್ಟಿದರೆ, ಅಥವಾ ಚಿವುಟಿದರೆ ರೋಗಿ ತನ್ನ ಕಾಲುಗಳನ್ನು ಆಡಿಸಬಹುದು, ನರಳಬಹುದು, ಅಥವಾ ಗೊಣಗಬಹುದು. ಆದರೆ ಹೀಗೆಲ್ಲ ಮಾಡಿದಾಗ ನಿದ್ರೆ ತಿಳಿದೇಳುವಂತೆ ಎಚ್ಚರಗೊಳ್ಳಲಾರ. ಪ್ರಜ್ಞಾಶೂನ್ಯಸ್ಥಿತಿ ಕೇವಲ ಕೆಲವು ನಿಮಿಷಗಳ ತನಕ ಇರಬಹುದು, ಅಥವಾ ಹಲವುಗಂಟೆ, ದಿವಸ ವರ್ಷಗಳ ತನಕವೂ ವ್ಯಾಪಿಸಬಹುದು. ಹಲವಾರು ವರ್ಷ ಪರ್ಯಂತ ಪ್ರಜ್ಞಾಶೂನ್ಯಸ್ಥಿತಿಯಲ್ಲಿದ್ದ ಸಂದರ್ಭಗಳು ಪತ್ರಿಕೆಗಳಲ್ಲಿ ವರದಿಯಾಗಿವೆ.
ಪ್ರಜ್ಞಾಶೂನ್ಯತೆಗೆ ಯಾವುದೇ ನಿರ್ದಿಷ್ಟ ನರ ಸಮೂಹಗಳು ಕಾರಣ ಎಂದು ಹೇಳಲುಬಾರದು. ಆದರೂ ಶರೀರಕ್ರಿಯಾವಿಜ್ಞಾನಿಗಳಿಗೆ ತಿಳಿದಿರುವಂತೆ ಮಿದುಳಿನ ಮಧ್ಯದಲ್ಲಿರುವ ಜಾಲಿಕಾ ನರವಿನ್ಯಾಸದಲ್ಲಿ (ರೆಟಿಕ್ಯುಲರ್ ಫಾರ್ಮೇಶನ್) ಏರುಪೇರಾಗುವುದೇ ಕಾರಣ ಎಂದು ತಿಳಿದು ಬಂದಿದೆ. ನಮ್ಮ ಶರೀರದ ಅನೇಕ ಜ್ಞಾನೇಂದ್ರಿಯಗಳು ಈ ಜಾಲಿಕಾ ನರವಿನ್ಯಾಸಕ್ಕೆ ತಮ್ಮ ತಮ್ಮ ಚಟುವಟಿಕೆಗಳ ಫಲವಾದ ನರಪ್ರಚೋದನೆಗಳನ್ನು ಕಳುಹಿಸಿ ಅದು ಉದ್ರೇಕಗೊಳ್ಳುವಂತೆ ಮಾಡುತ್ತವೆ. ತತ್ಛಲವಾಗಿ ಮಿದುಳಿನ ಕಾರ್ಟಿಕ್ಸ್ ಭಾಗವನ್ನು ಪುನಶ್ಚೇತನಗೊಳಿಸಿ ಅದು ದೇಹವ್ಯಾಪಾರಗಳನ್ನು ನಿಯಂತ್ರಿಸುವಂತೆ ಮಾಡಿ ವ್ಯಕ್ತಿ ಎಚ್ಚರದಿಂದಿರುವುದಕ್ಕೆ ಸಹಾಯಮಾಡುತ್ತದೆ. ಜಾಲಿಕಾನರವಿನ್ಯಾಸ ಒಂದೇ ಅಲ್ಲದೆ ಮಿದುಳಿನಲ್ಲಿರುವ ತಾಲಮಸ್ (ಶಿರಗುಳಿ) ಕಾರ್ಪಸ್ ಸ್ಟ್ರೈಯೇಟಮ್ ಇವುಗಳೆಲ್ಲ ಸಂಘಟಿತವಾಗಿ ಕೆಲಸ ಮಾಡಿ ವ್ಯಕ್ತಿಯನ್ನು ಎಚ್ಚರದ ಸ್ಥಿತಿಯಲ್ಲಿಟ್ಟಿರುತ್ತವೆ. ಮೋಟಾರು ಅಪಘಾತಗಳಲ್ಲಿ ತಲೆಗೆ ಪೆಟ್ಟುಬಿದ್ದು ಪರಿಣಮಿಸುವ ಭೀಕರ ದುರಂತಗಳಲ್ಲಿ ಶಾಶ್ವತ ಪ್ರಜ್ಞಾಶೂನ್ಯತೆ ಒಂದು. ಅಪಘಾತದಿಂದ ಜಾಲಿಕಾ ನರವಿನ್ಯಾಸಕ್ಕೆ ದುರಸ್ತು ಅಸಾಧ್ಯವಾದಂಥ ಹಾನಿ ಉಂಟಾಗುವುದೇ ಇದರ ಕಾರಣ. ಇಂಥ ಸಂಧರ್ಭದಲ್ಲಿ ವ್ಯಕ್ತಿ ಕೇವಲ ಸಸ್ಯಪ್ರಾಯವಾಗಿ ಜೀವನ ನಡೆಸುವಂತಿರುತ್ತದೆ. ಅನಾರೋಗ್ಯ ಪರಿಸ್ಥಿತಿಯ ಹಲವು ಸಂದರ್ಭಗಳಲ್ಲಿ ಸೆರಬ್ರಲ್ ಕಾರ್ಟೆಕ್ಸಿನ ನರಕೋಶಗಳಲ್ಲಿಯೂ ಮಿದುಳಿನ ಕೇಂದ್ರೀಯ ತಾಲಮಿಕ್ ನ್ಯೂಕ್ಲಿಯಸ್ಸುಗಳಲ್ಲಿಯೂ ಉಪಾಪಚಯ ಚಟುವಟಿಕೆಗಳಲ್ಲೂ ಅಡಚಣೆ ಉಂಟಾಗಬಹುದು. ಇವುಗಳಲ್ಲಿ ಮುಖ್ಯವಾದವು ಆಕ್ಸಿಜನ್ನಿನ ಕೊರತೆ (ಹೈಪಾಕ್ಸಿಯ). ರಕ್ತದಲ್ಲಿ ಸಕ್ಕರೆ ಮಟ್ಟದ ಕುಸಿತ (ಹೈಪೊಗ್ಲೆøಸೀಮಿಯ), ರಕ್ತದ ಪ್ರತ್ಯಾಮ್ಲತೆ ಹೆಚ್ಚು ಕಡಿಮೆ ಆಗುವಿಕೆ (ಆಲ್ಕಲೋಸಿಸ್ ಮತ್ತು ಆ್ಯಸಿಡೋಸಿಸ್), ಬಿ ಜೀವಸತ್ತ್ವಗಳ ಕೊರತೆ ಮುಂತಾದವು. ಬಾರ್ಬಿಟುರೇಟ್ ಬ್ರೋಮೈಡ್ ಮತ್ತು ಮದ್ಯಸಾರ ಮುಂತಾದ ಔಷಧಿಗಳು ಸೆರಬ್ರಲ್ ಕಾರ್ಟೆಕ್ಸಿನ ನರಕೋಶಗಳ ಮೇಲೆ ಪ್ರಭಾವ ಬೀರಿ ಪ್ರಜ್ಞಾಶೂನ್ಯತೆಯನ್ನು ಉಂಟುಮಾಡುತ್ತವೆ. ದೇಹೋಷ್ಣತೆ ಅತಿ ಹೆಚ್ಚುವಿಕೆ ಮತ್ತು ಅತಿ ಕಡಿಮೆಯಾಗುವಿಕೆ (ಹೈಪರ್ ಮತ್ತು ಹೈಪೊಥರ್ಮಿಯ) ಇವು ನರಕೋಶಗಳ ಉಪಾಪಚಯ ಚಟುವಟಿಕೆಯ ಮೇಲೆ ಅನಿರ್ದಿಷ್ಟ ಪ್ರಭಾವ ಬೀರಿ ಪ್ರಜ್ಞಾಶೂನ್ಯತೆಗೆ ಕಾರಣವಾಗುತ್ತವೆ. ರಕ್ತದ ಒತ್ತಡ ಬಹಳ ಕಮ್ಮಿಯಾದಾಗ ಮಿದುಳಿನ ರಕ್ತ ಪರಿಚಲನೆಯಲ್ಲಿ ಕುಂದು ಉಂಟಾಗಿ ತಾತ್ಕಾಲಿಕ ಪ್ರಜ್ಞಾಶೂನ್ಯತೆ ತಲೆದೋರುತ್ತದೆ. ರಕ್ತದ ಒತ್ತಡ ಸಾಧಾರಣ ಪರಿಸ್ಥಿತಿಗೆ ಬಂದಾಗ ಪ್ರಜ್ಞೆ ಮರಳಿ ಬರುತ್ತದೆ. ಪ್ರಜ್ಞಾಶೂನ್ಯತೆ ಮಿದುಳಿನ ಅಥವಾ ದೇಹದ ಕೆಲವು ಕಾಯಿಲೆಗಳ ಒಂದು ಲಕ್ಷಣವೇ ಹೊರತು ಅದೇ ಒಂದು ಕಾಯಿಲೆಯಲ್ಲ. ಆದರೆ ಇದೊಂದು ತುರ್ತುಸ್ಥಿತಿ. ರೋಗಿಯನ್ನು ನಿರಂತ ನಿಗಾ ಘಟಕದಲ್ಲಿಟ್ಟು (ಇಂಟೆನ್ಸಿವ್ ಕೇರ್ ಯೂನಿಟ್) ನೋಡಿಕೊಳ್ಳಬೇಕು. ತಜ್ಞ ದಾದಿಯರು ಹಾಗೂ ವೈದ್ಯರು ಈ ಘಟಕದಲ್ಲಿರಬೇಕು.
(ಜಿ.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ